Monday, May 26, 2008

ಆತ್ಮ

ಬಿಳಿ ಹಾಲು
ಝರಿ ನೀರು
ಗಿಳಿ ಹಸಿರು
ಶುಭ್ರಕ್ಕೆ ಮತ್ತೊಂದಿಲ್ಲ
ನಮ್ಮ "ಮನಸ್ಯಾ"ಕೆ ಹೀಗಲ್ಲ?
ನಂಗೂ ಗೊತ್ತಿಲ್ಲ.

ಹುಳಿ ಮಾವು
ಸಿಹಿ ಜೇನು
ಬಿಸಿ ತುಪ್ಪ
ಮಗೆ-ಮಗೆದು ತಿಂಬ "ದೇಹ"ಕ್ಕೆ
ಹಸಿದವರು ಯಾಕೆ ಕಾಣಲ್ಲ?
ಇದರ ನಡೆ
ಒಂಚೂರು ನಂಗೆ ರುಚಿಸಲ್ಲ.

ಬಾನ ಸೂರ್ಯ
ಬಿಸೋ ಗಾಳಿ
ಹೊತ್ತಿರುವ ಈ ಭೂಮಿ
ತಮಗ೦ತ ಏನ ಕೂಡಲ್ಲ.
"ಬುದ್ದಿ" ಏನು ಕಲಿಯಿತೋ ಎಂಥೋ
ತನ್ ಕೆಲಸ ಬಿಟ್ರೆ
ಅದಕೆಂತ ಕಾಣಲ್ಲ.
ಬರೀ "ಅಹ೦"ದೊಳಗೆ ಮುಳುಗಿದೆಯಲ್ಲ.

ಎತ್ತರದ ಆ ಗುಡ್ಡ
ದಟ್ಟನೆಯ ಈ ಕಾಡು
ಸುತ್ತಿರುವ ನೀರ್ಮೋಡ
ತ೦ಪೊ೦ದೆ ಸೆಳೆದು ತರುವ೦ತೆ
"ಆಲೋಚನೆ"ಗಳ್ಯಾಕೆ ಏನೂ ಮಾಡಲ್ಲ?
ಪರರ ಜರಿವದ ಬಿಟ್ಟು
ಬೇರೆಂತು ಅವಕೆ ಬೇಕಿಲ್ಲ.

ಹಸಿ ಸುಳ್ಳು
ಬರೀ ಪಾಪ
ಮನಸೊಳಗೆ ಇಣುಕಿದರೆ
ಕಶ್ಮಲವೇ ಎಲ್ಲಾ...
ಯಾರ ತಪ್ಪೋ -
ನನಗ್ಯಾಕೆ ಶಿಕ್ಷೆಯೋ?
ಈ ಮರು-ಹುಟ್ಟು, ಮುಕ್ತಿ
ಇನ್ಯಾರಿಗೋ??
ನನಗ೦ತು ಒಂದೂ ಬೇಕಿಲ್ಲ.

Thursday, May 1, 2008

ಜಾತಿ ಮೀನು

ಮೆಲ್ಲನೆ ಹರಿವ ನೀರು
ಅಲ್ಲೊಂದು ಬಿಳಿ ಮೀನು
ಜೊತೆಗೊಂದು ಕರಿ ಮೀನು
ಬಿಳಿ ಮೀನ್ಗಳಾಟ ಎಲ್ಲರಿಗೂ ಚಂದ
ನನ್ನ್ ಕಣ್ಣ ಸೆಳೆದದ್ದು ಕರಿ ಮೀನಿನ೦ದ

ಕಲ್ಹತ್ತಿ ಇಳಿವಾಗ, ಗಿಡಸುತ್ತಿ ಬರುವಾಗ
ಒತ್ತೊತ್ತಿ ಈಜುವುವು ನವ ಜೋಡಿಯಂತೆ
ಹಗಲೆಲ್ಲ ಅಡುವುವು, ಮುಸ್ಸಂಜೆ ಹರಡುವುವು
ಇಡೀ ಇರುಳ ಕಳೆಯುವುವು ಬೆಳಗಿನ೦ತೆ
ಬಿಳಿ ಮೀನಿಗ೦ತು ಕರಿ ಮೀನಿನದೇ ಚಿ೦ತೆ - ನನ್ನ೦ತೆ

ಹಗಲಿರುಳು ಮೈಮರೆತು ಎಡೆಬಿಡದೆ ಕಲೆತಿರುವ
ಈ ಪ್ರೇಮಿಗಳ ಬಿಳಿ ಮೀನ ಗು೦ಪೊ೦ದು ಸುತ್ತುವರೆದಿತ್ತು,
ಮು೦ದಾಗುವ ಅವಘದವ ನೆನೆದು ನನ್ಮನವು ನಡುಗಿ,
ಮೈಯಲ್ಲಾ ಬೆವರಿ ಜೀವಾ ತಾ ಕುಸಿಯತೊಡಗಿತ್ತು.
ಪ್ರೆಮಿಗಳ ಬದುಕು ಇನ್ನೆ೦ತೋ ಎಂದು ದಿಗಿಲುಗೊ೦ಡಿತ್ತು

ನಲಿವ ಮೀನ್ಗಳಿಗೆ ನನ್ನ ದಿಗಿಲಿಲ್ಲ,
ಅಲ್ಲಿ ಹುಟ್ಟಿದ ಪ್ರೀತಿ ಎಂದು ಸಾಯುವುದಿಲ್ಲ...
ನನಗ್ಯಾಕೊ ನನ್ನ ಕರಿಮಿನಿನದೇ ಬಹಳ ಚಿ೦ತೆ
ಕೊಳದ ಮೀನ್ಗಳು ಮರುಗಿದವು ಏನೋ ಅರ್ಥವಾದಂತೆ....