Thursday, April 24, 2008

ನಾಕು ಕನಸು

ಮುಂಜಾವೇ ಹಂಗ
ಕನಸು ಮುಗಿದೊಡನೆ ಬೆಚ್ಚೆದ್ದು ಕುಳಿತಿದ್ದೆ ಹಿಂಗ

ಹಸಿರೆಲೆಯ ಮೊಗ್ಗಿನ್ನೂ ಅರಳಿರಲಿಲ್ಲ,
ಮೃದುವಾಗಿ ಎಳೆತಂದು
ಮಡಿಲೊತ್ತಿಕೊಂಡಿದ್ದೆ, ಕಣ್ಬಿಟ್ಟಾಗ
ಮೊಗ್ಗಿರಲಿಲ್ಲ - ಈ ಮುಂಜಾವೇ ಹಂಗ...

ತಿರುಗಿ ಮಲಗಿದರೆ ಮನೆ ತುಂಬಾ ಮೊಗ್ಗಿನದೇ ಕಂಪು
ಗಮಗಮನೆ ಮೂಗೇರಿ ಮನವನಾವರಿಸಿತ್ತು ತಂಪು
ಸ್ವರ್ಗಕ್ಕೆ ಮೂರೇಗೇಣು; ಎಚ್ಚೆತ್ತು ನೋಡಿದರೆ
ಇನಿತು ಕಂಪಿರಲಿಲ್ಲ - ಈ ಮುಂಜಾವೇ ಹಂಗ...

ಮೊಗ್ಗು ಚೆಲುವಾಗಿತ್ತು, ಚೆಲುವರಳಿ ಹೂವಾಗಿತ್ತು,
ಹೂನೋಟ ನಗುವಾಗಿ, ಆ ನಗುವು ಗುಂಗಾಗಿ, ಇಡೀ ದೇಹ
ಹೂವೊಳಗೆ ಹುದುಗಿ ಹೊಗಿತ್ತು. ಹುದುಗಿದ ಕೈಯ
ಹರವಿಗೆ ಹೂವೆ ಸಿಗಲಿಲ್ಲ - ಈ ಮುಂಜಾವೇ ಹಂಗ...

ನನ್ ಜೀವ ಹೂವೇರಿ, ಮನಸು ಮಕರ೦ದವ ಸೇರಿ
ಆ ಸುಖವು ಹಣ್ಣಾಗಿ, ಇಡೀ ಹಣ್ಣು ಸಿಹಿಯಾಗಿ, ಬದುಕು
ಬಯಸಿದ೦ತಾಗುವ ಮೊದಲೇ ವಿದಿ ತಾನೊ೦ದ ಬಗೆದಿತ್ತು.
ಕೈಸಿಗದ ಹೂವು ಮರೆಯಾಗಿ ದೂರ ಸರಿದಿತ್ತು - ಈ ಮುಂಜಾವೇ ಹಂಗ...