ಜೋಗದ ಸಿರಿ ಬೆಳಕಿನಲ್ಲಿ
ಧರೆಯ ಝರಿಯ ಸೊಬಗಿನಲ್ಲಿ
ಕಾನಿನಂಚ ಹಸಿರಿನಲ್ಲಿ
ಬೇಳೆ ಕಾಳು ಅಡಿಕೆ ನೆಟ್ಟು
ಹುಲ್ಲ ಸೂರ ಮನೆಯ ಮಾಡಿ
ಬದುಕು ತಾನೆ ಸುಖಿಸುತಿರಲು
ಮನೆಯು ಮುಳುಗೋ ಸುದ್ದಿಯೊಂದು
ಊರ ತುಂಬಾ ಹರಡಿತು
"ಜೋಗದ ಬೆಳಕು" ತನ್ನ ಸಣ್ಣ ಕಣ್ಣ ತೆರೆಯಿತು.
ಜೋಗದ ಸಿರಿ ಬೆಳಕಿನಲ್ಲಿ!!!
ಬಿಡದೆ ಬರುವ ಮಳೆಯ ನೆರೆಗೆ
ಗಗನ ಚುಂಬಿ ಒಡ್ಡನೊಡ್ಡಿ
ಬಿರನೆ ತುಂಬೋ ನೀರಿನಲ್ಲಿ
ಬೆಳೆದು ನಿಂತ ಪೈರ ಜೊತೆಗೆ
ಬದುಕೋ ಆಸೆ ಮುಳುಗುತಿರಲು
ಜನರ ಆಕ್ರಂದನ ಮುಗಿಲ ಮುಟ್ಟಿತು.
ತಾನೇ ನೆಟ್ಟ ಸಸಿಯನಪ್ಪಿ ನೀರಿನೊಳಗೆ ಪ್ರಾಣ ಬಿಟ್ಟ
ನಮ್ಮ ತಂದೆ ಕೊನೆಯ ಉಸಿರು ಅಲ್ಲೇ ಹಾಗೆ ಉಳಿಯಿತು.
ಜೋಗದ ಸಿರಿ ಬೆಳಕಿನಲ್ಲಿ!!!
ಕಷ್ಟನೆಲ್ಲಾ ಕಟ್ಟಿಕೊಂಡು
ಊರ ಬಿಟ್ಟು ಊರ ದಾಟಿ
ತಿಳಿಯದಾದ ಜಾಗ ಸೇರೇ
ನೀರ ನೆನಪು ಇನ್ನೂ ದುಃಖ ತರವುದು
ಹಳೆಯ ಮನೆಯ ತೋಟದಲ್ಲಿ
ಮುಳುಗಿ ಹೋದ ಬೊಳು ಮರದಿ ಒಂಟಿ ಕಾಗೆ
ಕೂಗುತಿತ್ತು ತಿಥಿಯ ದಿನವ ಹೇಳಲು
ಜೋಗದ ಸಿರಿ ಬೆಳಕಿನಲ್ಲಿ!!!
ಸಾಲದಲ್ಲೆ ಸಸಿಯ ನೆಟ್ಟು
ಕಣ್ಣ ನೀರ ಬುಡದಿ ಸುರಿದು
ಹತ್ತು ತಿಥಿಯು ಕಳೆದೆ ಹೋಯ್ತು
ಹೊಸತು ಬೆಳೆಯ ಕಾಣಲು
ಮುಳುಗಿಹೋದ ಹೊಲದಿ ಹುಟ್ಟಿ ಬಂದ ಹಳ್ಳಿ ಬೆಳಕು
ಯಾವ ಪೇಟೇ ಸೇರಿ ಹೋಯ್ತೋ
ಯಾರ ಮನೆಯ ಬೆಳಗಲೋ...
ಜೋಗದ ಸಿರಿ ಬೆಳಕಿನಲ್ಲಿ!!!
ಅಂತೂ ಇಂತೂ ಮೊನ್ನೆ ತಾನೇ
ತಂತಿ ಮೇಲೆ ಬೆಳಕು ಬಂತು
ಒಮ್ಮೆ ಮಿಂಚಿ ಹಾಗೆ ಹೋಯ್ತು
ಆರ್ದ ಗಂಟೆ ನಿಲ್ಲದು; ತಂದೆ ತಿಥಿಗೂ ಬಾರದು.
ಚಿಮಣಿ ಬೆಳಕ ಮಬ್ಬಿನಲ್ಲಿ
ನಮ್ಮ ಮನೆಯ ಕಂದ ಪದ್ಯವೊ೦ದ
ಕ೦ಠಪಾಠ ಮಾಡುತಿದ್ದ
"ಜೋಗದ ಸಿರಿ ಬೆಳಕಿನಲ್ಲಿ..."
Tuesday, July 29, 2008
Subscribe to:
Posts (Atom)