Thursday, September 25, 2008

ಮರೆತರೂ ನೀ, ಮರೆಯಲಿ ಹ್ಯಾಂಗಾ

ಬೇಸರವೆನಿಸುವುದೋ ಇನಿಯಾ
ನಿನ್ನಯ ದನಿಯನು ಕೇಳದ
ಬೆಳಗೇ ಬೇಸರವೆನಿಸುವುದೋ....

ಉರೋರ ದಿಬ್ಬದ
ಕಲ್ಲಿನ ಸುತ್ತಲು ಹಸಿರೆಲೆ
ಚಿಗುರಿಹುದೋ ಇನಿಯಾ
ಹಸಿರೆಲೆ ಉಸಿರಲಿ
ನಿನ್ ನಗು ಇರದಿರೆ
ದಿಬ್ಬದ ಹುಲ್ಲಿನ
ಹಾಸೇ ಬೇಸರವೆನಿಸುವುದೋ....

ಹಿತ್ತಿಲ ಮರೆಯ
ಗುಟ್ಟಿನ ಜಾಗದಿ ಮಲ್ಲಿಗೆ
ಹಬ್ಬಿಹುದೋ ಇನಿಯಾ
ಮಲ್ಲೆಯ ಮೂಡಿದ
ನನ್ನೀ ಅಂದವ
ನೋಡಲು ಬರದಿರೆ
ಮಲ್ಲೆಯ ಮೊಗವೇ ಬೇಸರವೆನಿಸುವುದೋ....

ಚಿಗುರಿದ ಮಾಮರದೊಳಗಿನ
ಗೂಡಲಿ ಕೋಗಿಲೆ
ಕುಳಿತಿಹುದೋ ಇನಿಯಾ
ಕೋಗಿಲೆಯಂತೆ ನಾನೂ ಹಾಡುವೆ
ನೀ ಆಲಿಸ ಬರದಿರೆ
ಕೋಗಿಲೆ ದನಿಯೇ ಬೇಸರವೆನಿಸುವುದೋ....

ನನ್ನೊಡಲೊಳಗೆ
ಪ್ರತಿ ಕ್ಷಣ ನಿನ್ನ
ನೆನಪೇ ಕಾಡಿವೆಯೋ ಇನಿಯಾ
ಪ್ರತಿ ನೆನಪಿನ ಉಸಿರಿಗೂ
ಭರವಸೆ ಚಿಮ್ಮಿಸಿ ನನ್
ಜೀವದೊಳ್-ಜೀವವ ಬೆರೆಸದೆ ಹೋದರೆ
ಈ ಜೀವನವೇ ಬರಿ ಬೇಸರವೆನಿಸುವುದೋ ...

2 comments:

ತೇಜಸ್ವಿನಿ ಹೆಗಡೆ said...

ಮರೆತೆನೆಂದರೂ ಮರೆಯಲಿ ಹ್ಯಾಂಗ ಎಂಬ ಕವನದ ಸಾಲನ್ನು ನೆನಪಿಸಿತು ನಿಮ್ಮ ಕವನ. ತುಂಬಾ ಸುಂದರ, ಸರಳ ಹಾಗೂ ಭಾವಪೂರ್ಣವಾಗಿದೆ.

Yogesh Bhat said...

ದನ್ಯವಾದಗಳು ಹೆಗಡೆಯವರೇ.
ಕವನ ಬರೆದೆ, ಈಗೇಕೋ ಅಷ್ಟೊಂದು ಚೆನ್ನಿಲ್ಲ ಅನಿಸುತ್ತಿದೆ :(.